ಹೊಸದಿಗಂತ ವರದಿ,ಮಂಗಳೂರು:

ಹಿಂದು ದೇವರನ್ನು ಅವಹೇಳನ ಮಾಡಿದ ಆರೋಪ ಸಂಬಂಧ ಮಂಗಳೂರಿನ ವೆಲೆನ್ಸಿಯಾದ ಸಂತ ಜೆರೋನಾ ಶಾಲೆಯ ಶಿಕ್ಷಕಿ ಸಿಸ್ಟರ್ ಪ್ರಭಾ ಅವರನ್ನು ಶಾಲಾ ಆಡಳಿತ ಮಂಡಳಿ ವಜಾ ಮಾಡಿದೆ.

ಸೋಮವಾರ ಬೆಳಗ್ಗಿನಿಂದಲೇ ಡಿಡಿಪಿಐ ಕಚೀರಿ ಮುಂಭಾಗ ಶಾಸಕ ಡಿ.ವೇದವ್ಯಾಸ ಕಾಮತ್ ಹಾಗೂ ಡಾ.ವೈ.ಭರತ್ ಶೆಟ್ಟಿ ಅವರ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಪ್ರತಿಭಟನೆಯಲ್ಲಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ಅವರು, ಧರ್ಮ ಸೂಕ್ಷ್ಮತೆಯನ್ನು ಮರೆತು ಹಿಂದುಗಳ ಆರಾಧ್ಯ ದೈವ ಶ್ರೀ ರಾಮನ ಬಗ್ಗೆ ಮುಗ್ಧ ವಿದ್ಯಾರ್ಥಿಗಳ ಮುಂದೆ ಅವಹೇಳನಕಾರಿಯಾಗಿ ಮಾತನಾಡಿ ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡವಿದ ಶಿಕ್ಷಕಿಯ ನಡೆಯನ್ನು ತೀವ್ರವಾಗಿ ಖಂಡಿಸಿದರು.

ಶಾಸಕ ಭರತ್ ಶೆಟ್ಟಿ, ವಿದ್ಯಾರ್ಥಿಗಳ ಪೋಷಕರು, ವಿಶ್ವ ಹಿಂದೂ ಪರಿಷತ್ ಸೇರಿದಂತೆ ಹಿಂದೂ ಸಂಘಟನೆಗಳ ಪ್ರಮುಖರು ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿ ಮುಂದೆ ನಡೆಸಿದ ಪ್ರತಿಭಟನೆಯಲ್ಲಿ ಬಿಇಒ ಅವರು ಕೂಡಲೇ ಶಾಲೆಗೆ ಭೇಟಿ ನೀಡಬೇಕು, ತಪ್ಪಿತಸ್ಥ ಶಿಕ್ಷಕರನ್ನು ಅಮಾನತುಗೊಳಿಸಲೇಬೇಕು ಮತ್ತು ಶಾಲೆಯ ಮಾನ್ಯತೆಯನ್ನು ರದ್ದುಪಡಿಸಲು ಶಿಫಾರಸು ಮಾಡಬೇಕೆಂದು ಶಾಸಕರು ಪಟ್ಟು ಹಿಡಿದಿದ್ದರು.

ಕೊನೆಗೂ ಶಾಲೆಯ ಆಡಳಿತ ಮಂಡಳಿ ಶಿಕ್ಷಕಿಯನ್ನು ಅಮಾನತುಗೊಳಿಸಿದೆ.

ಫೆಬ್ರವರಿ 8ರಂದು ‘Work is worship’ ಎಂಬ ವಿಷಯ ಬಗ್ಗೆ ಪಾಠ ಮಾಡಿದ್ದ ಶಿಕ್ಷಕಿ ಸಿಸ್ಟರ್ ಪ್ರಭಾ ಅಯೋಧ್ಯೆ ರಾಮಮಂದಿರ ಹಾಗೂ ಪ್ರಭು ಶ್ರೀರಾಮನ ಬಗ್ಗೆ ಅವಹೇಳನ ಮಾಡಿದ್ದಾರೆ ಎಂದು ವಿದ್ಯಾರ್ಥಿಗಳು ತಮ್ಮ ಪೋಷಕರ ಬಳಿ ಹೇಳಿಕೊಂಡಿದ್ದರು. ನಂತರ ಪೋಷಕರು ಮತ್ತು ಹಿಂದೂ ಕಾರ್ಯಕರ್ತರು ಶಿಕ್ಷಕಿ ವಿರುದ್ಧ ಆಕ್ರೋಶ ಹೊರಹಾಕಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

Leave a Reply

Your email address will not be published. Required fields are marked *