ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ-ಪಾಕಿಸ್ತಾನದ (India, Pakistan) ನಡುವೆ ವಿಶ್ವಾಸ ಮೂಡಿಸುವ ಅಗತ್ಯವಿದೆ. ಯಾಕೆಂದರೆ ಪಾಕಿಸ್ತಾನಿಯರು ಭಾರತದ ಅತಿದೊಡ್ಡ ಆಸ್ತಿ. ಭಾರತೀಯರು ಸ್ನೇಹಶೀಲರಾಗಿದ್ದರೆ ಪಾಕಿಸ್ತಾನಿಯರು ಇನ್ನೂ ಹೆಚ್ಚು ಸ್ನೇಹಶೀಲರಾಗಿರುತ್ತಾರೆ ಎಂದು ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಮಣಿಶಂಕರ್ ಅಯ್ಯರ್‌ (Mani Shankar Aiyar) ಹೇಳಿದ್ದಾರೆ.

ಪಾಕಿಸ್ತಾನದಷ್ಟು ಪ್ರೀತಿ ತೋರುವ ಇನ್ನಾವುದೇ ದೇಶವನ್ನು ನಾನು ನೋಡಿಲ್ಲ. ನನ್ನ ಅನುಭವದಲ್ಲಿ ಹೇಳುವುದಾದ್ರೆ ಪಾಕಿಸ್ತಾನಿಯರು ಎಲ್ಲದಕ್ಕೂ ಅತಿಯಾಗಿ ಪ್ರತಿಕ್ರಿಯೆ ನೀಡುತ್ತಾರೆ. ನಾವು ಸ್ನೇಹಶೀಲರಾಗಿದ್ದರೆ ಅವರು ಅತೀ ಸ್ನೇಹಶೀಲರಾಗಿರುತ್ತಾರೆ. ನಾವು ತಿರುಗಿನಿಂತರೆ ಅವರು ಇನ್ನೂ ತೀಕ್ಷ್ಣವಾಗಿ ತಿರುಗಿ ನಿಲ್ಲುತ್ತಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಪಾಕಿಸ್ತಾನದ ಅಲ್ಹಾಮಾದಲ್ಲಿ ನಡೆದ ಫೈಜ್ ಉತ್ಸವದಲ್ಲಿ ಇತ್ತೀಚೆಗೆ ಮಾತನಾಡಿದ್ದ ಅವರು, ನಾನು ಈ ಹಿಂದೆ ಪಾಕಿಸ್ತಾನದಲ್ಲಿ ಭಾರತದ ಕಾನ್ಸುಲ್ ಜನರಲ್ ಆಗಿ ಕೆಲಸ ಮಾಡಿದ್ದೆ. ಆಗ ಪಾಕಿಸ್ತಾನಿಯರು ನನ್ನನ್ನೂ ನನ್ನ ಪತ್ನಿಯನ್ನೂ ಮುಕ್ತವಾಗಿ ಸ್ವಾಗತಿಸಿ ತುಂಬಾ ಪ್ರೀತಿಯಿಂದ ನೋಡಿಕೊಂಡಿದ್ದರು. ಹೀಗಾಗಿ ಭಾರತ-ಪಾಕಿಸ್ತಾನದ ನಡುವೆ ವಿಶ್ವಾಸ ಮೂಡಿಸುವ ಅಗತ್ಯವಿದೆ. ಆದರೆ ಕಳೆದ 10 ವರ್ಷಗಳ ನರೇಂದ್ರ ಮೋದಿ ಆಡಳಿತವು ವಿಶ್ವಾಸದ ಬದಲು ದ್ವೇಷ ಮೂಡಿಸಿದೆ ಎಂದು ಆರೋಪಿಸಿದ್ದಾರೆ.

ಪಾಕಿಸ್ತಾನ ಹೇಗೆ ಇಸ್ಲಾಮಿಕ್‌ ಗಣರಾಜ್ಯವಾಗಿದೆಯೋ ಹಾಗೆಯೇ ಭಾರತವನ್ನು ಹಿಂದುತ್ವದ ಗಣರಾಜ್ಯವನ್ನಾಗಿ ಮಾಡುವ ಪ್ರಯತ್ನ ಇತ್ತೀಚಿನ ವರ್ಷಗಳಲ್ಲಿ ನಡೆದಿದೆ. ಇದು ತಪ್ಪು. ಪಾಕಿಸ್ತಾನದ ರಚನೆಯ ಕಾಲದಲ್ಲೇ ನೆಹರು ಹಾಗೂ ಗಾಂಧೀಜಿಯವರು ಭಾರತವನ್ನು ಧರ್ಮದ ಆಧಾರದ ಮೇಲೆ ನಿರ್ಮಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು ಎಂಬುದನ್ನು ಪುನರುಚ್ಛರಿಸಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

Leave a Reply

Your email address will not be published. Required fields are marked *